ಕೊಸಿಗಿನ್, ಅಲೆಕ್ಸಿ ನಿಕೊಲಾಯೆವಿಚ್ 
1904-. ಸೋವಿಯತ್ ರಾಜಕಾರಣಿ. ಸೋವಿಯೆತ್ ಸಮಾಜವಾದಿ ಗಣರಾಜ್ಯ ಒಕ್ಕೂಟದ ಮಂತ್ರಿಮಂಡಳದ ಸಭಾಧ್ಯಕ್ಷ (ಪ್ರಧಾನಮಂತ್ರಿ) (1964). ಲೆನಿನ್‍ಗ್ರಾಡ್‍ನಲ್ಲಿ (ಆಗ ಸೇಂಟ್ ಪೀಟರ್ಸ್ ಬರ್ಗ್) 1904 ರ ಫೆಬ್ರವರಿ 20 ರಂದು ಲೋಹ ಕೆಲಸಗಾರನ ವಂಶದಲ್ಲಿ ಜನಿಸಿದ. 

ಕೊಸಿಗಿನ್ ತನ್ನ 15ನೆಯ ವಯಸ್ಸಿನಲ್ಲೇ ಕೆಂಪು ಸೈನ್ಯಕ್ಕೆ ಸ್ವಯಂಸೇವಕನಾಗಿ ಸೇರಿದ. ಮಿಲಿಟರಿ ಖಾತೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ ಮೇಲೆ ಲೆನಿನ್‍ಗ್ರಾಡಿನ ಒಂದು ಸಹಕಾರಿ ಶಾಲೆಯನ್ನು ಸೇರಿ ಅಲ್ಲಿಂದ ಪದವೀಧರನಾದ. (1924). ಈತ ಲೆನಿನ್‍ಗ್ರಾಡಿನ ಟೆಕ್ಸ್‍ಸ್ಟೈಲ್ ಇನ್‍ಸ್ಟಿಟ್ಯೂಟಿನಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು ಆ ಕ್ಷೇತ್ರದಲ್ಲಿ ಪದವಿ ಗಳಿಸಿದ್ದು 1935ರಲ್ಲಿ. ಅನಂತರ ಕೊಸಿಗಿನ್‍ಗೆ ಸೋವಿಯೆತ್ ಸರ್ಕಾರದ ಸದಸ್ಯತ್ವ ಲಭ್ಯವಾಯಿತು. ಸೋವಿಯೆತ್ ಒಕ್ಕೂಟದ ಜವಳಿ ಕೈಗಾರಿಕೆಯ ಪೀಪಲ್ಸ್ ಕಾಮಿಸಾರ್ ಆಗಿ ಕೊಸಿಗಿನ್ ನೇಮಕಗೊಂಡ. 

	ಆ ಕಾಲಕ್ಕೆ ಆಗಲೇ ಕೊಸಿಗಿನ್‍ಗೆ ಉದ್ಯಮ ನಿರ್ವಹಣೆಯಲ್ಲಿ ಆಳವಾದ ಅನುಭವ ಪ್ರಾಪ್ತವಾಗಿತ್ತು. ಸೈಬೀರಿಯಾದ ಗ್ರಾಹಕರ ಸಹಕಾರ ಸಂಸ್ಥೆಗಳ ಒಕ್ಕೂಟದಲ್ಲಿ ಸುಮಾರು 6 ವರ್ಷಗಳ ಕಾಲ ಆತ ಕೆಲಸ ಮಾಡಿದ್ದಾಗಿತ್ತು. ಕೊಸಿಗಿನ್ ಪದವೀಧರನಾಗುವುದಕ್ಕೂ ಮುಂಚೆ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕನಾಗಿ ಕೆಲಸಮಾಡಿದ್ದ. ಈ ಕೆಲಸದಲ್ಲಿ ಮುಂದುವರಿದು 1935ರಲ್ಲಿ ಲೆನಿನ್‍ಗ್ರಾಡಿನ ಜವಳಿ ಗಿರಣಿಯ ನಿರ್ದೇಶಕನ ಹುದ್ದೆ ಪಡೆದ 1938ರ ಅಕ್ಟೋಬರಿನಲ್ಲಿ ಕೊಸಿಗಿನ್‍ಗೆ ಲೆನಿನ್‍ಗ್ರಾಡ್‍ನ ಮೇಯರ್ ಪದವಿ ಪ್ರಾಪ್ತವಾಯಿತು. ಕೊಸಿಗಿನ್‍ನ ಜೀವನದ ಮೊದಲ 35 ವರ್ಷಗಳು ಲೆನಿನ್‍ಗ್ರಾಡ್ ನಗರದೊಡನೆ ಗಣನೀಯವಾಗಿ ಹಾಸುಹೊಕ್ಕಾಗಿ ಬೆರೆತುಕೊಂಡಿವೆ. 

	ಅಲೆಕ್ಸಿ ಕೊಸಿಗಿನ್ ಪೀಪಲ್ಸ್ ಕಾಮಿಸಾರ್ ಆಗಿ 2 ವರ್ಷಗಳ ಕಾಲ ಕೆಲಸ ಮಾಡಿದ ಅನಂತರ ಸೋವಿಯೆತ್ ಒಕ್ಕೂಟದ ಪೀಪಲ್ಸ್ ಕಾಮಿಸಾರ್ಸ್‍ನ ಉಪಸಭಾಧ್ಯಕ್ಷನ (ವೈಸ್ ಚೇರ್‍ಮನ್ ಆಫ್ ದಿ ಕೌನ್ಸಿಲ್ ಆಫ್ ಪೀಪಲ್ಸ್ ಕಾಮಿಸಾರ್ಸ್) ಪದವಿಗೆ ಏರಿದ. 1953ರ ಮಾರ್ಚ್ ತಿಂಗಳಲ್ಲಿ ಆತ ಸೋವಿಯೆತ್ ಒಕ್ಕೂಟದ ಮಂತ್ರಿಮಂಡಳದ ಉಪಸಭಾಧ್ಯಕ್ಷನಾದ. (ವೈಸ್ ಚೇರ್‍ಮನ್ ಆಫ್ ದಿ ಕೌನ್ಸಿಲ್ ಆಫ್ ಮಿನಿಸ್ಟರ್ಸ್) ಈ ಅವಧಿಯಲ್ಲಿ ಆತ ಲಘು ಎಂಜಿನಿಯರಿಂಗ್ ಮತ್ತು ಆಹಾರ ಕೈಗಾರಿಕೆಗಳ ಅಭಿವೃದ್ಧಿ ಕಾರ್ಯವನ್ನು ನೋಡಿಕೊಳ್ಳುತ್ತಿದ್ದ. ಅನೇಕ ವೇಳೆ ಆತನನ್ನು ಕೇಂದ್ರ ಆಯೋಜನಾ ಮಂಡಲಿಗೆ ಪ್ರಮುಖನನ್ನಾಗಿ ನೇಮಿಸಲಾಗಿತ್ತು. ಅಲೆಕ್ಸಿ ಕೊಸಿಗಿನ್ ಸೋವಿಯೆತ್ ಒಕ್ಕೂಟದ ಮಂತ್ರಿಮಂಡಲದ ಮೊದಲನೆಯ ಉಪಾಧ್ಯಕ್ಷನಾಗಿ ನೇಮಕವಾದ್ದು 1960ರಲ್ಲಿ. ಕೊಸಿಗಿನನ ಚಟುವಟಿಕೆಗಳಲ್ಲಿ ವಿದೇಶಗಳೊಡನೆ ಆರ್ಥಿಕ ಸಂಬಂಧದ ಪ್ರಶ್ನೆಗಳು ಪ್ರಮುಖ ಪಾತ್ರವಹಿಸಿದ್ದುವು. ಕ್ರೆಮ್ಲಿನಿನ ಕಛೇರಿಯಲ್ಲಿ ಆತ ಆಗಾಗ್ಗೆ ಅನೇಕ ಅಧಿಕಾರಿಗಳಿಗೆ, ಉದ್ಯಮಿಗಳಿಗೆ ಮತ್ತು ಹಲವಾರು ದೇಶಗಳಿಂದ ಬಂದ ವ್ಯಾವಹಾರಿಕ ಮತ್ತು ಆರ್ಥಿಕ ನಿಯೋಗಗಳಿಗೆ ಭೇಟಿ ನೀಡುತ್ತಿದ್ದ. ಕೊಸಿಗಿನ್ ಸೋವಿಯೆತ್ ಒಕ್ಕೂಟದ ಅಧಿಕೃತ ನಿಯೋಗದ ಮುಂದಾಳಾಗಿ ಅನೇಕ ಐರೋಪ್ಯ ದೇಶಗಳಿಗೆ ಭೇಟಿಯಿತ್ತಿದ್ದ. ಫೆಬ್ರುವರಿ 1964ರಲ್ಲಿ ಕೊಸಿಗಿನ್‍ಗೆ ಹಿರೋ ಆಫ್ ಸೋಷಿಯಾಲಿಸ್ಟ್ ಲೇಬರ್ ಪ್ರಶಸ್ತಿಯನ್ನು ಕೊಡಲಾಯಿತು. ಇದು ಸೋವಿಯೆತ್ ಒಕ್ಕೂಟದ ಅತ್ಯಂತ ಉನ್ನತ ಪ್ರಶಸ್ತಿ. ಕೊಸಿಗಿನ್ ಭಾರತಕ್ಕೆ ಭೇಟಿ ನೀಡಿದ್ದು 4 ಭಾರಿ. ಸೋವಿಯೆತ್ ಒಕ್ಕೂಟದ ಮಂತ್ರಿಮಂಡಲದ ಸಭಾಧ್ಯಕ್ಷ ಸ್ಥಾನ ಗಳಿಸಿದ ಮೇಲೂ ಎರಡು ಭಾರಿ ಭಾರತಕ್ಕೆ ಭೇಟಿ ನೀಡಿದ್ದುಂಟು.
(ಜಿ.ಎಚ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ